ಶೈವ ಸಿದ್ಧಾಂತ

A Saivite Creed§

ಶೈವ ಸಿದ್ಧಾಂತ§

ಪ್ರಥಮ ಅನುಭಾವ:§

ದೇವರ ಅವ್ಯಕ್ತ ಸ್ವರೂಪದ ಕುರಿತು§

ಭಗವಾನ್ ಶಿವನೇ ಪರದೈವ. ಅವನ ಪರಿಪೂರ್ಣ ಸ್ವರೂಪವಾದ ಪರಶಿವನು ಕಾಲ,ದೇಶ ಹಾಗೂ ರೂಪಗಳಿಗೆ ಅತೀತ ಎಂದು ಎಲ್ಲ ಶಿವಭಕ್ತರು ನಂಬುತ್ತಾರೆ. ಪರಮಾತ್ಮ ಶಿವನ ಸ್ವರೂಪದ ಬಗೆಗೆ ಯೋಗಿ ನಿಶ್ಶಬ್ದವಾಗಿ "ನೇತಿ, ನೇತಿ” ಎಂದು ಉದ್ಗರಿಸುತ್ತಾನೆ. ಯಾವ ವಿವರಣೆಗೂ ನಿಲುಕದ ಆ ದೇವರ ದೇವನೇ ಮಹದೇವನಾದ ಶಿವ. ಓಂ. §

ಎರಡನೆಯ ಅನುಭಾವ:§

ದೇವರ ಸರ್ವವ್ಯಾಪಿ ಪ್ರೇಮಮಯ ಸ್ವರೂಪವನ್ನು ಕುರಿತು§

ಶಿವನೇ ಪರದೈವವೆಂದು ಎಲ್ಲ ಶಿವಭಕ್ತರ ನಂಬುಗೆ. ಇಡೀ ಬ್ರಹ್ಮಾಂಡವನ್ನೂ, ಸಕಲ ಚರಾಚರ ವಸ್ತುಗಳನ್ನೂ ವ್ಯಾಪಿಸಿರುವ, ಎಲ್ಲರಿಗೂ ಸನಿಹದಲ್ಲಿರುವ ಭಗವಂತನ ಪ್ರೇಮಮಯ ಸ್ವರೂಪವೇ ಪರಾಶಕ್ತಿ. ಸೃಷ್ಟಿಯ ಸಮಸ್ತ ರೂಪಗಳ ಒಳಗೂ ಶಕ್ತಿ, ಜ್ಞಾನ, ಆನಂದ ರೂಪಿಯಾಗಿ ಪ್ರವಹಿಸುತ್ತಿರುವ ಪರಿಶುದ್ಧ ಪ್ರಜ್ಞೆಯೇ ಅಸ್ತಿತ್ವದ ಆದಿದ್ರವ್ಯವೂ ಮತ್ತು ಮೂಲಾಧಾರವೂ ಆದ ಪರಾಶಕ್ತಿ. ಓಂ.§

ಮೂರನೆಯ ಅನುಭಾವ:§

ಇಷ್ಟದೈವ ಹಾಗೂ ಎಲ್ಲರ ಸೃಷ್ಟಿಕರ್ತನೂ ಆದ ದೇವರ ಕುರಿತು§

ಶಿವನೇ ದೇವರ ದೇವನೆಂದು ಎಲ್ಲ ಶಿವಭಕ್ತರೂ ನಂಬುತ್ತಾರೆ. ಪರಿಪೂರ್ಣನೂ, ಆದಿ-ಅಂತ್ಯ ರಹಿತನೂ, ವಿಶ್ವವ್ಯಾಪಿಯೂ, ಸರ್ವಾಂತರ್ಯಾಮಿಯೂ ಆದ ಪರಮಾತ್ಮನೇ ಮಹದೇವ. ಅವನು ವೇದ, ಆಗಮಗಳ ರಚನಕಾರ. ಸರ್ವೋತ್ತಮನಾದ ಆ ಪರಮೇಶ್ವರ ಸಕಲ ಸೃಷ್ಟಿಯ ಕಾರಣೀಭೂತ, ಕರ್ತೃ, ಜಗದ್ರಕ್ಷಕ ಹಾಗೂ ಲಯಕಾರಕ. ಓಂ.§

ನಾಲ್ಕನೆಯ ಅನುಭಾವ: §

ದೇವ ಗಜಮುಖನ ಕುರಿತು§

ಎಲ್ಲ ಶಿವಭಕ್ತರಿಗೂ ಮಹಾದೇವ ಗಣೇಶನಲ್ಲಿ ಅಪರಿಮಿತ ನಂಬಿಕೆ. ಯಾವುದೇ ಪೂಜೆ , ಕೆಲಸವನ್ನು ಆರಂಭಿಸುವ ಮುನ್ನ ಅವರು ಪೊಡಮಡುವುದು ಶಿವ-ಶಕ್ತಿಯರ ಪುತ್ರನಾದ ಆ ಪ್ರಭುವಿನ ಅಡಿಗಳಿಗೇ. ಭಕ್ತರ ಪ್ರಥಮ ಆರಾಧ್ಯ ದೈವನಾದ ಗಣಪತಿಯು ಕಾರುಣ್ಯಮೂರ್ತಿ ಮತ್ತು ನಿಷ್ಪಕ್ಷಪಾತಿ. ನ್ಯಾಯವೇ ಅವನ ಮನ. ಓಂ.§

ಐದನೆಯ ಅನುಭಾವ: §

ದೇವ ಕಾರ್ತಿಕೇಯನ ಕುರಿತು§

ಶಿವ-ಶಕ್ತಿಯರ ಮಗನಾದ ಕಾರ್ತಿಕೇಯನಲ್ಲಿ ಶಿವಭಕ್ತರಿಗೆಲ್ಲ ನಂಬುಗೆ. ಅವನ ಅನುಗ್ರಹದ ಈಟಿ (ವೇಲ್) ಅಜ್ಞಾನದ ಬಂಧನವನ್ನು ಕಳಚುವಂತದ್ದು. ಪದ್ಮಾಸನದಲ್ಲಿ ಕುಳಿತ ಯೋಗಿ ಧ್ಯಾನಸ್ಥನಾಗಿ ಮುರುಗನನ್ನು ಆರಾಧಿಸುತ್ತಾನೆ. ಹಾಗೆ, ಮುರುಗನಲ್ಲಿ ನೆಟ್ಟ ಯೋಗಿಯ ಮನ ಶಾಂತವಾಗುತ್ತದೆ. ಓಂ.§

ಆರನೆಯ ಅನುಭಾವ:§

ಆತ್ಮದ ಸೃಷ್ಟಿ ಹಾಗೂ ದೈವದೊಡನೆ ಆತ್ಮ ಏಕೀಭವಿಸುವುದರ ಕುರಿತು§

ಪ್ರತಿ ಆತ್ಮವೂ ಶಿವನ ಸೃಷ್ಟಿ ಮತ್ತು ಅದು ಈಶ್ವರ ಸ್ವರೂಪಿ ಎಂಬುದು ಎಲ್ಲ ಶಿವಭಕ್ತರ ವಿಶ್ವಾಸ. ಎಲ್ಲ ಆತ್ಮಗಳಿಗೂ ತಮ್ಮ ಈಶ್ವರ ಸ್ವರೂಪದ ಪೂರ್ಣ ಅರಿವು ಬರುವುದು ಅವುಗಳನ್ನು ಕವಿದಿರುವ ಕರ್ಮ, ಮಾಯೆ ಮತ್ತು ತಾವು ದೈವದಿಂದ ಬೇರೆಂಬ ಭಾವದ ಬಂಧನವು ಶಿವನ ಕೃಪೆಯಿಂದ ಕಳಚಿಬಿದ್ದಾಗ ಮಾತ್ರ. ಓಂ.§

ಏಳನೆಯ ಅನುಭಾವ:§

ಅಸ್ತಿತ್ವದ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಸ್ತರಗಳ ಕುರಿತು§

ಶಿವನ ಭಕ್ತರೆಲ್ಲ ಜಗದ ಮೂರು ಸ್ತರಗಳಲ್ಲಿ ನಂಬಿಕೆಯಿಟ್ಟಿದ್ದಾರೆ: ಆತ್ಮಗಳು ಭೌತಿಕ ರೂಪ ಧರಿಸಿರುವ ಸ್ಥೂಲ ಜಗತ್ತು; ಆತ್ಮಗಳು ಸಾಮಾನ್ಯ ಕಣ್ಣಿಗೆ ಅಗೋಚರ ಕಾಯಗಳಾಗಿ ವಿಹರಿಸುವ ಸೂಕ್ಷ್ಮ ಜಗತ್ತು ಹಾಗೂ ಆತ್ಮಗಳು ತಮ್ಮ ಸಹಜ ದೇದೀಪ್ಯಮಾನ ರೂಪದಲ್ಲಿರುವ ಕಾರಣ ಜಗತ್ತು. ಓಂ.§

ಎಂಟನೆಯ ಅನುಭಾವ:§

ಕರ್ಮ, ಸಂಸಾರ ಹಾಗೂ ಮರುಹುಟ್ಟಿನಿಂದ ಬಿಡುಗಡೆಯ ಕುರಿತು§

ಶಿವನ ಉಪಾಸಕರೆಲ್ಲ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಉಳ್ಳವರು. ಕರ್ಮ ಸಿದ್ಧಾಂತದಂತೆ ಪ್ರತಿ ಆತ್ಮವೂ ತಾನು ಮಾಡುವ ಕಾರ್ಯಗಳೆಲ್ಲದರ ಫಲವನ್ನು ಅನುಭವಿಸಲೇಬೇಕು ಹಾಗೂ ತನ್ನ ಕರ್ಮ ಫಲವನೆಲ್ಲ ಸವೆಸಿ ಮೋಕ್ಷ ಗಳಿಸುವ ತನಕ ಆತ್ಮ ಮರುಹುಟ್ಟು ಪಡೆಯುತ್ತಲೇ ಇರುತ್ತದೆ. ಓಂ.§

ಒಂಬತ್ತನೆಯ ಅನುಭಾವ:§

ಆಂತರಿಕ ಮುನ್ನಡೆಯ ನಾಲ್ಕು ಮಾರ್ಗಗಳ ಬಗೆಗೆ§

ಪರಶಿವನ ಸಾಕ್ಷಾತ್ಕಾರಕ್ಕಾಗಿ, ಸದ್ಗುರುವಿನ ನೇರ ಮಾರ್ಗದರ್ಶನ ಮತ್ತು ಕೃಪೆಯೊಂದಿಗೆ ನಡೆಸುವ ಚರ್ಯೆ - ಋಜು ಜೀವನ, ಕ್ರಿಯೆ - ದೇಗುಲಾರಾಧನೆ ಹಾಗೂ ಯೋಗವು ಮೋಕ್ಷ ಸಾಧನವಾದ ಜ್ಞಾನವನ್ನು ಪಡೆಯಲು ಅತ್ಯವಶ್ಯ ಎಂದು ಎಲ್ಲ ಶಿವಭಕ್ತರೂ ನಂಬುತ್ತಾರೆ. ಓಂ.§

ಹತ್ತನೆಯ ಅನುಭಾವ:§

ಸಮಸ್ತ ಸೃಷ್ಟಿಯ ಒಳಿತಿನ ಬಗೆಗೆ§

ಯಾರೂ ಸ್ವಭಾವದಿಂದಲೇ ದುಷ್ಟರಲ್ಲ ಎಂಬುದು ಶಿವನ ಉಪಾಸಕರೆಲ್ಲರ ನಂಬುಗೆ. ತೋರಿಕೆಗಷ್ಟೇ ಅಜ್ಞಾನ ಕೆಡಕಿನ ಮೂಲವೆಂಬಂತೆ ಕಂಡರೂ ನಿಜಕ್ಕೂ ಕೆಡಕಿಗಾವ ಮೂಲವೂ ಇಲ್ಲ. ಒಳಿತೂ ಇಲ್ಲ, ಕೆಡಕೂ ಇಲ್ಲ, ಎಲ್ಲವೂ ಶಿವನ ಚಿತ್ತವೇ ಎಂಬುದನ್ನು ದಯಾಪರರಾದ ಎಲ್ಲಾ ಶಿವಭಕ್ತರೂ ಬಲ್ಲರು. ಓಂ.§

ಹನ್ನೊಂದನೆಯ ಅನುಭಾವ:§

ದೇಗುಲಾರಾಧನೆಯ ಗಹನ ಉದ್ದೇಶದ ಕುರಿತು§

ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಜಗತ್ತುಗಳು ಹದವಾಗಿ ಮೇಳೈಸಿ ಒಟ್ಟಾಗಿ ಕೆಲಸ ಮಾಡುವುದೇ ಧರ್ಮ ಎಂದು ಎಲ್ಲ ಶಿವಭಕ್ತರ ವಿಶ್ವಾಸ. ದೇಗುಲಾರಾಧನೆಯಿಂದ ಈ ಮೂರೂ ಲೋಕಗಳ ಜೀವಿಗಳ ನಡುವೆ ಸಂಪರ್ಕ ಏರ್ಪಟ್ಟು ಸಾಮರಸ್ಯ ಉಂಟಾಗುತ್ತದೆ ಎಂದು ಶಿವನ ಉಪಾಸಕರು ನಂಬುತ್ತಾರೆ. ಓಂ.§

ಹನ್ನೆರಡನೆಯ ಅನುಭಾವ:§

ಶಿವ ಪಂಚಾಕ್ಷರಿ ಮಂತ್ರದ ಕುರಿತು§

ಐದು ಪವಿತ್ರ ಅಕ್ಷರಗಳನ್ನು ಒಳಗೊಂಡ “ನಮಃ ಶಿವಾಯ” ಮಂತ್ರವು ಶೈವ ಮತದ ಸರ್ವೋಚ್ಛ ಹಾಗೂ ಸಾರಭೂತವಾದ ಮಂತ್ರವೆಂದು ಎಲ್ಲ ಶಿವಭಕ್ತರೂ ಪರಿಗಣಿಸುತ್ತಾರೆ. ಶಿವ ಪಂಚಾಕ್ಷರಿ ಮಂತ್ರದ ಮಹಿಮೆಯ ಗುಟ್ಟೆಂದರೆ ಸರಿಯಾದ ಸಾಧಕರಿಂದ, ಸಮರ್ಪಕ ಸಮಯದಲ್ಲಿ ಮಂತ್ರವನ್ನು ಕೇಳಿಸಿಕೊಳ್ಳುವುದು. ಓಂ.§